ಈವ್‍ಲಿನ್, ಜಾನ್
1620-1706. ಇಂಗ್ಲಿಷ್ ಗದ್ಯ ಸಾಹಿತಿ, ಶ್ರೀಮಂತ ಮನೆತನದವ. ಆಕ್ಸ್‍ಫರ್ಡಿನಲ್ಲಿ ವಿದ್ಯಾಭ್ಯಾಸ ಮಾಡಿದ. ರಾಯಲ್ ಸೊಸೈಟಿಯ ಸದಸ್ಯನಾಗಿದ್ದ. ಲಂಡನ್ನಿನ ಜೀವನದಲ್ಲಿ ವಿಶೇಷವಾದ ಆಸಕ್ತಿಯನ್ನು ವಹಿಸಿ ಅದರ ಸಮಸ್ಯೆಗಳನ್ನು ಕುರಿತು ಕಿರುಹೊತ್ತಗೆಗಳನ್ನು ಬರೆದು, ಪ್ಲೇಗ್ ಮತ್ತು ಲಂಡನ್ನಿನ ಮಹಾಜ್ವಾಲೆಗಳ ಸಮಯದಲ್ಲಿ ಕರ್ತವ್ಯನಿಷ್ಠನಾಗಿದ್ದು ಲಂಡನ್ನಿನ ಕಟ್ಟಡಗಳ ಪುನರ್ ನಿರ್ಮಾಣದಲ್ಲಿ ಆಸಕ್ತಿ ವಹಿಸಿದ. ಚಿತ್ರಕಲೆ, ಶಿಲ್ಪ, ವರ್ಣಕಲೆ, ಕೆತ್ತನೆ ಕೆಲಸ, ನಾಣ್ಯಶಾಸ್ತ್ರ, ಚರಿತ್ರೆ, ರಾಜ್ಯಶಾಸ್ತ್ರ, ವಿದ್ಯಾಭ್ಯಾಸ, ವ್ಯವಸಾಯ, ತೋಟಗಾರಿಕೆ, ವಾಣಿಜ್ಯ-ಹೀಗೆ ಈತ ಅನೇಕ ವಿಷಯಗಳನ್ನು ಕುರಿತು ಬರೆದಿದ್ದಾನೆ. ಇಂದು ಈವ್‍ಲಿನ್ನನ ಹೆಸರು ಉಳಿದಿರುವುದು ಮುಖ್ಯವಾಗಿ ಈತನ ದಿನಚರಿಯಿಂದ. ಇವನ ಜೀವನದ ಬಹುಭಾಗದ ಅನುಭವಗಳು ಈ ದಿನಚರಿಯಲ್ಲಿ ನಿರೂಪಿತವಾಗಿವೆ. ವಾಟನ್ ಹೌಸಿನ ಪುಸ್ತಕಾಲಯದ ಹಸ್ತಪ್ರತಿಗಳಲ್ಲಿ ಅನಿರೀಕ್ಷಿತವಾಗಿ ದೊರೆತ ಈ ಹಸ್ತಪ್ರತಿ 1818ರಲ್ಲಿ ಮೊದಲು ಪ್ರಕಟವಾಯಿತು. ಫ್ರಾನ್ಸ್ ಇಟಲಿ ಮತ್ತು ಹಾಲೆಂಡುಗಳಲ್ಲಿ ಪ್ರವಾಸಮಾಡಿದ ಈವ್‍ಲಿನ್ನನ ದಿನಚರಿ ವಿಷಯಗಳ ಗಣಿ. ಇದರಲ್ಲಿನ ವೃತ್ತಾಂತಗಳು ವಿವರಗಳಿಂದ ಕೂಡಿದ್ದು ನಿಷ್ಕøಷ್ಟವಾಗಿವೆ. ಸಮಕಾಲೀನ ಜನಜೀವನ ಇದರ ಪುಟಗಳಲ್ಲಿ ಸ್ಫುಟವಾಗಿ ಪ್ರತಿಬಿಂಬಿತವಾಗಿದೆ. ವಿದ್ವತ್ಪೂರ್ಣವಾದ ವಿಚಾರಪೂರ್ಣವಾದ ತಿಳಿವಳಿಕೆಯುಳ್ಳ ಮನಸ್ಸಿನ ಪ್ರತಿಕ್ರಿಯೆಯನ್ನು ಇಲ್ಲಿ ಕಾಣಬಹುದು. ಇವನದು ಸಾಮಾನ್ಯ ಜನತೆಯಿಂದ ಸ್ವಲ್ಪ ದೂರನಿಲ್ಲುವ ಜ್ಞಾನಾರ್ಥಿಯ ಮನೋಭಾವ. ಆದರೆ ಜನಜೀವನದಲ್ಲಿ ತಕ್ಕಷ್ಟು ಆಸಕ್ತಿವಹಿಸುವ ಕರ್ತವ್ಯಶೀಲ ಚೇತನ ಇವನದು. ಚಾರಿತ್ರಿಕ ಮತ್ತು ಸಾಹಿತ್ಯಕ ಮೌಲ್ಯಗಳ ದೃಷ್ಟಿಯಿಂದ ಇವನ ದಿನಚರಿಯನ್ನು ಪೀಪ್ಸ್‍ನ ದಿನಚರಿ ಮತ್ತು ಬಾಸ್‍ವೆಲ್ಲನ ಜರ್ನಲ್‍ಗಳೊಂದಿಗೆ ಹೋಲಿಸಬಹುದು.

ಈತ ಮೂರು ಡಜನ್ನಿಗಿಂತ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾನೆ. ದಿನಚರಿಯನ್ನು ಬಿಟ್ಟರೆ ಮುಖ್ಯವಾದುವೆಂದರೆ - 1 ಸ್ಕಲ್‍ಪ್ಟೂರ ಆರ್ ದಿ ಆರ್ಟ್ ಆಫ್ ಎನಗ್ರೇವಿಂಗ್ ಆನ್ ಕಾಪರ್ (1662). 2. ಸಿಲ್ವ ಆರ್ ಎ ಡಿಸ್‍ಕೋಸ್ ್ ಆಫ್ ಫಾರೆಸ್ಟ್ ಟ್ರೀಸ್ (1664).
(ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ